ಬಂಟ್ವಾಳ, ಏಪ್ರಿಲ್ 13: ಸರ್ಕಾರಿ ಬಸ್ಸಿನ ಮಹಿಳಾ ಮೀಸಲು ಸೀಟಿನಲ್ಲಿ ಕುಳಿತಿದ್ದ ಪುರುಷ ಪ್ರಯಾಣಿಕನೋರ್ವ, ತನ್ನನ್ನು ಪ್ರಶ್ನಿಸಿದ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕ ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.
ಉಪ್ಪಿನಂಗಡಿ ನಿವಾಸಿ ಸುಕುಮಾರ್ ಎಂಬಾತನೇ ಹಲ್ಲೆ ನಡೆಸಿದವನಾಗಿದ್ದು, ಹಲ್ಲೆಗೊಳಗಾದವರನ್ನು ಬಸ್ ನಿರ್ವಾಹಕ ನಾಗರಾಜ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಕಾಸರಗೋಡಿನಿಂದ ಹೊರಟ ರಾಜಹಂಸ ಬಸ್ಸು ವಿಟ್ಲದತ್ತ ಪಯಣ ಬೆಳೆಸುತ್ತಿದ್ದು, ಕಾಸರಗೋಡಿನಲ್ಲಿ ಬಸ್ ಏರಿದ್ದ ಪ್ರಯಾಣಿಕ ಸುಕುಮಾರ ಮಹಿಳಾ ಮೀಸಲು ಸೀಟಿನಲ್ಲಿ ಕುಳಿತಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ನಿರ್ವಾಹಕ ನಾಗರಾಜ್ ಸೀಟ್ ಬದಲಿಸುವಂತೆ ಸೂಚಿಸಿದ್ದರು. ಇದರಿಂದ ಆಕ್ರೋಶಗೊಂಡ ಸುಕುಮಾರ್, ನಾಗರಾಜ್ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ. ರಾತ್ರಿ ೯.೩೦ ರ ಸುಮಾರಿಗೆ ಅಡ್ಯನಡ್ಕ ಸಮೀಪ ಈ ಘಟನೆ ನಡೆದಿದ್ದು. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ಪೋಲಿಸರು ಆರೋಪಿ ಸುಕುಮಾರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.